ಬಾಬಾ ಆಮ್ಟೆ
1914. ಹಿರಿಯ ಸಮಾಜ ಸುಧಾರಕರು. ಮಾನವತಾವಾದಿ. ಸ್ವಾತಂತ್ರ್ಯ ಹೋರಾಟಗಾರರು. ಕುಷ್ಟರೋಗಿಗಳ ಸೇವಾಶ್ರಮ ಸ್ಥಾಪಿಸಿ ಅವರಲ್ಲಿ ಆತ್ಮವಿಶ್ವಾಸ ಹುಟ್ಟಿಸಿದವರು. ಮಾದಿಯಾ-ಗೊಂಡ ಬುಡಕಟ್ಟಿನ ಜನರನ್ನು ಮೇಲಕ್ಕೆತ್ತಿದವರು. ಬಾಬಾ ಆಮ್ಟೆ ಎಂದೇ ಪ್ರಸಿದ್ಧರಾಗಿರುವ ಇವರ ನಿಜನಾಮ ಮುರಲೀಧರ ದೇವಿದಾಸ ಆಮ್ಟೆ. ಹಿಂಗನಘಾಟಿನಲ್ಲಿ 26 ಡಿಸೆಂಬರ್ 1914 ರಂದು ಜನಿಸಿದರು. ತಂದೆ ದೇವಿದಾಸ ಸರ್ಕಾರಿ ಅಧಿಕಾರಿಯಾಗಿದ್ದರು. ಪ್ರೌಢ ಶಿಕ್ಷಣ ಮುಗಿದ ಮೇಲೆ ಕಾನೂನು ಶಿಕ್ಷಣ ಮುಗಿಸಿ ವರೋಡಾದಲ್ಲಿ (ಮಹಾರಾಷ್ಟ್ರ) ವಕೀಲಿವೃತ್ತಿ ಆರಂಭಿಸಿದರು. ಕುಸ್ತಿ, ಈಜು, ಕುದುರೆ ಸವಾರಿ, ಶಿಕಾರಿ-ಇವು ಬಾಬಾ ಅವರ ಹವ್ಯಾಸಗಳು. ಸಂಗೀತ ಮತ್ತು ಕಾವ್ಯವೆಂದರೆ ಬಲು ಆಸಕ್ತಿ; ಪ್ರಕೃತಿ ಪ್ರೇಮಿ. ಚಿಕ್ಕಂದಿನಿಂದಲೇ ಬಡವರನ್ನು ಕಂಡರೆ ಮರುಕ. 1948ರಲ್ಲಿ ವರೋಡಾ ಪುರಸಭೆಯ ಉಪಾಧ್ಯಕ್ಷರು. ವರೋಡಾ ಭಂಗಿ ಸಂಘದ ಅಧ್ಯಕ್ಷರಾದರು. ಭಂಗಿಗಳ ಶೋಚನೀಯ ಸ್ಥಿತಿ ಕಂಡು ಮರುಗಿದರು. ತಾವೇ ಸ್ವತಃ ಭಂಗಿಯ ಕೆಲಸ ಮಾಡಿದರು. 1949ರಲ್ಲಿ ಕಲ್ಕತ್ತೆಯ 'ಸ್ಕೂಲ್ ಆಫ್ ಟ್ರಾಪಿಕಲ್ ಡಿಸೀಸ್ ಸೇರಿ ಕುಷ್ಠರೋಗ ಚಿಕಿತ್ಸಾ ವಿಧಾನವನ್ನು ಅಭ್ಯಸಿಸಿದರು. ಕುಷ್ಠರೋಗ ನಿವಾರಣ ಲಸಿಕೆ ತಯಾರಿಸಲು ತಮ್ಮ ದೇಹವನ್ನೇ ಪ್ರಯೋಗಕ್ಕೆ ಒಡ್ಡಿದರು. ಅದೇ ವರ್ಷ ಮಹಾರೋಗಿ (ಕುಷ್ಠರೋಗಿ) ಸೇವಾಸಮಿತಿಯೊಂದನ್ನು ಸ್ಥಾಪಿಸಿದರು.

ಕ್ರಿಸ್ತ, ಮಹಾತ್ಮಾಗಾಂಧಿ, ವಿನೋಬಾಭಾವೆಯವರ ಆದರ್ಶವನ್ನು ಇಟ್ಟುಕೊಂಡ ಇವರು ಮಾಕ್ರ್ಸ್, ಮಾವೊ, ರಸ್ಕಿನ್, ಟಾಟೋರ್ ಮುಂತಾದವರಿಂದ ಪ್ರಭಾವಿತರಾದರು. 1951ರಲ್ಲಿ ವರೋಡಾದಲ್ಲಿ 'ಆನಂದವನ ಎಂಬ ಸಂಸ್ಥೆ ಸ್ಥಾಪಿಸಿದರು. ಹೆಂಡತಿ, ಒಂದು ಮಗು ಮತ್ತು ಆರು ಜನ ಕುಷ್ಠ ರೋಗಿಗಳೊಡನೆ 25 ಎಕರೆ ಪ್ರದೇಶದಲ್ಲಿ ಈ ಸಂಸ್ಥೆ ಆರಂಭಿಸಿದರು. ಈಗ ಅದು 450 ಎಕರೆಯುಳ್ಳ ವಿಶಾಲಪ್ರದೇಶವಾಗಿ ಅಭಿವೃದ್ಧಿಯಾಗಿದೆ. 300 ಎಕರೆಯಲ್ಲಿ ಬೆಳೆ ತೆಗೆಯುತ್ತಾರೆ. 1500 ವಿದ್ಯಾರ್ಥಿಗಳಿರುವ ಆಟ್ರ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜು, 500 ವಿದ್ಯಾರ್ಥಿಗಳಿರುವ ಕೃಷಿ ಕಾಲೇಜು, ಕುರುಡರ, ಅಂಗವಿಕಲರ ಶಾಲೆಗಳು ಇವೆ. ಕುಷ್ಠರೋಗಿಗಳು ಸಮಾಜದಲ್ಲಿ ತಲೆ ಎತ್ತಿ ಬಾಳುವಂತೆ ಮಾಡಬೇಕೆಂಬುದು ಇವರ ಉದ್ದೇಶ. ತಾವು ಸಮಾಜಕ್ಕೆ ಹೊರೆ ಎಂಬ ಕೀಳರಿಮೆಯನ್ನು ಕುಷ್ಠರೋಗಿಗಳಲ್ಲಿ ಹೋಗಲಾಡಿಸಲು ಬಾಬಾ ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರೂ ಇತರರಂತೆ ಬಾಳಲು ಆನಂದವನದಲ್ಲಿ ಕೃಷಿ, ಹೈನುಗಾರಿಕೆ, ಕೋಳಿ, ಕುರಿ, ಹಂದಿ, ಜೇನುಸಾಕಣೆ ಮುಂತಾದವನ್ನು ಆರಂಭಿಸಿದರು. ಈ ಸಂಸ್ಥೆಗೆ ವಿದೇಶೀ ನೆರವು ಕೂಡ ಇದೆ. ನೆಹರೂ ಪ್ರಶಸ್ತಿ ವಿಜೇತಳಾದ ಬಾರ್ಬರಾ ವಾರ್ಡ್ ಪ್ರಶಸ್ತಿ ಧನವಾದ ಒಂದು ಲಕ್ಷ ರೂಪಾಯಿಗಳನ್ನು ಆನಂದವನಕ್ಕೆ ನೀಡಿದ್ದಾರೆ.

ಶ್ರಮಿಕ ವಿದ್ಯಾಪೀಠ ಎಂಬ ಸಂಸ್ಥೆಯನ್ನು ಬಾಬಾ ಸ್ಥಾಪಿಸಿದ್ದಾರೆ. ಬಡವ-ಬಲ್ಲಿದ, ರೋಗಿ-ನಿರೋಗಿ, ಅಕ್ಷರಸ್ಥ-ನಿರಕ್ಷರಸ್ಥರೆಲ್ಲರು ಒಂದುಗೂಡಿ ಪರಸ್ಪರ ಭೇದಭಾವ ಇಟ್ಟುಕೊಳ್ಳದೆ ಒಗ್ಗಟ್ಟಿನಿಂದ ದುಡಿಯಲು ತೊಡಗಿಸುವುದೇ ಈ ವಿದ್ಯಾಪೀಠದ ಗುರಿ. ದೈಹಿಕ ಶ್ರಮವೇ ಇಲ್ಲಿ ಮುಖ್ಯ. ಪ್ರತಿವರ್ಷ ಮೇ ತಿಂಗಳಲ್ಲಿ ಇದರ ವತಿಯಿಂದ ಅಂತರ-ಭಾರತಿ ಶ್ರಮಸಂಸ್ಕಾರ ಶಿಬಿರ ನಡೆಯುತ್ತದೆ. ಭಾರತಾದ್ಯಂತ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ವೈದ್ಯರು, ವಕೀಲರು, ಸಾಹಿತಿಗಳು ಮುಂತಾದವರು ಇದರಲ್ಲಿ ಭಾಗವಹಿಸುತ್ತಾರೆ.

ಆಂಧ್ರಪ್ರದೇಶ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಮಾದಿರಿಯಾ-ಗೊಂಡ ಬುಡಕಟ್ಟಿನವರನ್ನು ಮುಂದುವರಿಸಲು ಬಾಬಾ ಸಾಕಷ್ಟು ಶ್ರಮಿಸಿದ್ದಾರೆ. ಬಾಬಾರ ಶ್ರಮ ಸಾರ್ಥಕಗೊಂಡು ಇಂದು ಆ ಬುಡಕಟ್ಟು ಸಾಕಷ್ಟು ಮುಂದುವರಿದಿದೆ.

ಮಹಾನ್ ಚೇತನ, ಕುಷ್ಠರೋಗಿಗಳ ಆಶಾದೀವಿಗೆ, ಅಭಯಸಾಧಕರಾದ ಇವರಿಗೆ ಅನೇಕ ಬಿರುದುಗಳು ಬಂದಿವೆ. 1971ರಲ್ಲಿ ಪದ್ಮಶ್ರೀ, 1978ರಲ್ಲಿ ಜಮನಾಲಾಲ ಬಚಾಜ ಪ್ರಶಸ್ತಿ, 1983ರಲ್ಲಿ ಕುಷ್ಠರೋಗ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪ್ರತಿಷ್ಠಿತ ಡ್ಯಾಮಿಯೆನ್ ಡಟನ್ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.

ಎಪ್ಪತ್ತರ ಹರೆಯದ ಬಾಬಾ ಅವರಿಗೆ ಎರಡು ಸಲ ಶಸ್ತ್ರ ಚಿಕಿತ್ಸೆ ಆಗಿದ್ದರೂ ಅವರ ಚಟುವಟಿಕೆ, ಚುರುಕುತನ ಸ್ವಲ್ಪವೂ ಕುಗ್ಗಿಲ್ಲ. ಪ್ರತಿದಿನ ಕಾಡಿನಲ್ಲಿ 10 ಕಿಮೀ ಸುತ್ತಾಡುತ್ತಾರೆ. ಸರಳಜೀವಿ, ಮಾನವತಾವಾದಿಯಾದ ಇವರು ಜನ ಸೇವೆಗೇ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದಾರೆ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
								*